ಕರ್ನಾಟಕ ಕುಸ್ತಿ ಸಂಘವು ದಿನಾಂಕ 4-12-2022ರಂದು ಅಸ್ತಿತ್ವಕ್ಕೆ ಬಂತು. ಕರ್ನಾಟಕ ಕುಸ್ತಿ ಸಂಘವು ಮೊದಲನೇ ಬಾರಿಗೆ ರಾಷ್ಟ್ರೀಯ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ಅತ್ಯಂತ ಹೆಚ್ಚಿನ ಪದಕಗಳನ್ನು ಪಡೆಯುವ ಮೂಲಕ ರಾಜ್ಯದ ಘನತೆಯನ್ನು ಹೆಚ್ಚಿಸಿತು. 2024 ಜನವರಿ ಮಾಹೆಯಲ್ಲಿ ತಮಿಳುನಾಡಿನ ಈರೋಡ್ ನಲ್ಲಿ ನಡೆದ ದಕ್ಷಿಣ ಭಾರತ ಚಾಂಪಿಯನ್ ಶಿಪ್ ನಲ್ಲಿ ಒಟ್ಟು 24 ಚಿನ್ನದ ಪದಕ, 3 ಬೆಳ್ಳಿ ಪದಕ ಮತ್ತು 2 ಕಂಚಿನ ಪದಕ ಪಡೆದುಕೊಳ್ಳುವ ಮೂಲಕ ತನ್ನ ಸಾಮರ್ಥ್ಯ ಸಾಬೀತುಪಡಿಸಿತು. ಆ ನಂತರವೂ ನಡೆದ ಹಲವಾರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸ್ಪರ್ಧಾಕೂಟಗಳಲ್ಲಿ ಹೆಚ್ಚಿನ ಪದಕಗಳನ್ನು ಪಡೆಯುವ ಮೂಲಕ ರಾಜ್ಯದಲ್ಲಿ ಕುಸ್ತಿ ಕ್ರೀಡೆಯನ್ನು ಜನಪ್ರಿಯಗೊಳಿಸುವಲ್ಲಿ ನಿರಂತರವಾಗಿ ಕಾರ್ಯನಿರತವಾಗಿದೆ. ರಾಜ್ಯಾಧ್ಯಕ್ಷರಾದ ಶ್ರೀ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಮತ್ತು ಪದಾಧಿಕಾರಿಗಳ ತಂಡದ ಸಮರ್ಥ ನಾಯಕತ್ವದಲ್ಲಿ 2024 ಡಿಸೆಂಬರ್ 6-8ರವರೆಗೆ ರಾಷ್ಟ್ರೀಯ ಹಿರಿಯ ಕುಸ್ತಿ ಪಂದ್ಯಾವಳಿಯನ್ನು ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸುವ ಮೂಲಕ ಕುಸ್ತಿ ಕ್ರೀಡಾ ವಿಭಾಗದಲ್ಲಿ ದಾಪುಗಾಲಿಡುತ್ತಿದೆ.