ಬೆಂಗಳೂರಿನಲ್ಲಿ ನಡೆಯಲಿರುವ ಮೊದಲ ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ಗೆ ಕರ್ನಾಟಕದ ಬಲಿಷ್ಠ ತಂಡ ಪ್ರಕಟ

ಪದಕ ಗೆಲ್ಲುವ ಭರವಸೆಯ ಬಲಿಷ್ಠ ಸ್ಪರ್ಧಿಗಳಾದ ಗೋಪಾಲ್ ಕೋಲಿ, ಮಹೇಶ್ ಪಿ. ಗೌಡ ಮತ್ತು ಶ್ವೇತಾ ಸಂಜು ಅಣ್ಣಿಕೇರಿ ನೇತೃತ್ವದಲ್ಲಿ 2024ರ ಸೀನಿಯರ್ ರಾಷ್ಟ್ರೀಯ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ತಂಡ ಸಜ್ಜು

ಬೆಂಗಳೂರು, 27 ನವೆಂಬರ್ 2024: ಡಿಸೆಂಬರ್ 6ರಿಂದ 8 ರವರೆಗೆ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಬಹು ನಿರೀಕ್ಷಿತ 2024ರ ಹಿರಿಯ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ಗೆ ಕರ್ನಾಟಕ ಕುಸ್ತಿ ಸಂಸ್ಥೆ, ರಾಜ್ಯ ತಂಡವನ್ನು ಪ್ರಕಟಿಸಿದೆ.

ಪುರುಷರ ಫ್ರೀಸ್ಟೈಲ್, ಪುರುಷರ ಗ್ರೀಕೋ ರೋಮನ್ ಮತ್ತು ಮಹಿಳೆಯರ ಫ್ರೀಸ್ಟೈಲ್ ಸೇರಿದಂತೆ ಎಲ್ಲಾ ಮೂರು ವಿಭಾಗಗಳಲ್ಲಿ ಕರ್ನಾಟಕದ ತಲಾ 10 ಕುಸ್ತಿಪಟುಗಳು ಸ್ಪರ್ಧಿಸಲಿದ್ದಾರೆ. ಪ್ರತಿ ಕುಸ್ತಿಪಟುಗಳು ವಿಭಿನ್ನ ತೂಕ ವಿಭಾಗದಲ್ಲಿ ಸ್ಪರ್ಧೆಗಿಳಿಯಲಿದ್ದಾರೆ.

ಸೀನಿಯರ್ ನ್ಯಾಶನಲ್ ಕುಸ್ತಿ ಚಾಂಪಿಯನ್‌ಶಿಪ್ ಕರ್ನಾಟಕದಲ್ಲಿ ಇದೇ ಮೊದಲ ಬಾರಿ ನಡೆಯುತ್ತಿದ್ದು, ರಾಜ್ಯದ ಕುಸ್ತಿಪಟುಗಳು ತವರು ನೆಲದಲ್ಲಿ ತಮ್ಮ ಕೌಶಲ್ಯ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕದ ಶ್ರೀಮಂತ ಕುಸ್ತಿ ಪರಂಪರೆಯನ್ನು ಪ್ರದರ್ಶಿಸಲು ಉತ್ಸುಕರಾಗಿದ್ದಾರೆ.

ಕೋಚ್ ರಾಮ್ ಕುಮಾರ್ ಡಿ. ನೇತೃತ್ವದ 10 ಸದಸ್ಯರ ಕರ್ನಾಟಕದ ಪುರುಷರ ಫ್ರೀಸ್ಟೈಲ್ ತಂಡ, ಗೋಪಾಲ್ ಕೋಲಿ (86 ಕೆ.ಜಿ), ಮಹೇಶ್ ಪಿ. ಗೌಡ (65 ಕೆ.ಜಿ) ಮತ್ತು ಮಹೇಶ್‌ಕುಮಾರ್ ಮುರಾರಿ ಲಾಂಗೊಟಿ (70 ಕೆ.ಜಿ) ಅವರಿಂದ ಪದಕಗಳ ನಿರೀಕ್ಷೆಯನ್ನು ಹೊಂದಿದೆ.

ಪುರುಷರ ಗ್ರೀಕೋ ರೋಮನ್‌ ತಂಡಕ್ಕೆ ಮಂಜು ಮಾದರ್ ತರಬೇತುದಾರರಾಗಿದ್ದು, ಕೊರವರ ಸಂಜೀವನ (63 ಕೆ.ಜಿ) ನೇತೃತ್ವದ ಪ್ರತಿಭಾವಂತ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ. ಕಾಮೇಶ್ ಮಹಾದೇವ ಪಾಟೀಲ್ (130 ಕೆ.ಜಿ) ಕರ್ನಾಟಕದ ಪರ ಅತಿ ಹೆಚ್ಚು ತೂಕದ ವಿಭಾಗದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಮಹಿಳಾ ಫ್ರೀಸ್ಟೈಲ್ ತಂಡದಲ್ಲಿ ಶ್ವೇತಾ ಸಂಜು ಅಣ್ಣಿಕೇರಿ (50 ಕೆ.ಜಿ) ಪದಕ ಗೆಲ್ಲುವವರ ಸಾಲಿನಲ್ಲಿ ಮುಂಚೂಣಿಯ ಸ್ಪರ್ಧಿ ಎನಿಸಿದ್ದಾರೆ. ಇವರೊಂದಿಗೆ ಪ್ರಿನ್ಸಿತಾ ಪೆಡ್ರು ಸಿದ್ದಿ (65 ಕೆ.ಜಿ) ಮತ್ತು ಭಗವತಿ ಜ್ಞಾನದೇವ್ ಗೊಂದಳಿ (72 ಕೆ.ಜಿ) ಅವರಿಂದಲೂ ಪದಕಗಳನ್ನು ನಿರೀಕ್ಷಿಸಲಾಗಿದೆ. ಈ ಇಬ್ಬರೂ ಕರ್ನಾಟಕದ ತಂಡದಲ್ಲಿ ಸ್ಥಾನ ಪಡೆದಿರುವ ಅತ್ಯಂತ ಕಿರಿಯ ಕುಸ್ತಿಪಟು‌ಗಳಾಗಿದ್ದಾರೆ. ರಾಜ್ಯದ ಮಹಿಳಾ ಫ್ರೀಸ್ಟೈಲ್ ತಂಡ ತಂಡಕ್ಕೆ ಕೋಚ್ ಸ್ಮಿತಾ ಪಾಟೀಲ್ ಮಾರ್ಗದರ್ಶನ ನೀಡುತ್ತಿದ್ದು, ತಮ್ಮ ಅಮೂಲ್ಯ ಅನುಭವವನ್ನು ಕುಸ್ತಿಪಟುಗಳಿಗೆ ಧಾರೆ ಎರೆಯುತ್ತಿದ್ದಾರೆ.

ಕರ್ನಾಟಕ ಕುಸ್ತಿ ಸಂಸ್ಥೆಯ ‌ತಾಂತ್ರಿಕ ಸಮಿತಿಯ ಅಧ್ಯಕ್ಷ ಡಾ.ವಿನೋದ್ ಕುಮಾರ್ ಕೆ. ಅವರು ಕರ್ನಾಟಕ ತಂಡದ ಭಾಗವಾಗಿದ್ದಾರೆ. ಅಂತರಾಷ್ಟ್ರೀಯ ತರಬೇತುದಾರರಾಗಿ ಅವರ ಅನುಭವ, ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಆತಿಥೇಯ ಕರ್ನಾಟಕ ತಂಡಕ್ಕೆ ಶಕ್ತಿ ತುಂಬಲಿದೆ.

ಕರ್ನಾಟಕ ಕುಸ್ತಿ ಸಂಸ್ಥೆಯ (ಕೆಡಬ್ಲ್ಯುಎ) ಅಧ್ಯಕ್ಷ ಹಾಗೂ ಭಾರತ ಕುಸ್ತಿ ಒಕ್ಕೂಟದ ಜಂಟಿ ಕಾರ್ಯದರ್ಶಿಗಳಾಗಿರುವ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ, ಸೀನಿಯರ್ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಉತ್ತಮ ಪ್ರದರ್ಶನ ತೋರುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘‘ನಮ್ಮ ತಂಡದಲ್ಲಿ ಪದಕ ಗೆಲ್ಲಬಲ್ಲ ಪ್ರಬಲ ಸ್ಪರ್ಧಿಗಳಿದ್ದಾರೆ. ಈ ಚಾಂಪಿಯನ್‌ಶಿಪ್ ನಮ್ಮ ಕುಸ್ತಿಪಟುಗಳಿಗೆ ಅದ್ಭುತ ಕಲಿಕಾ ಅನುಭವವಾಗಲಿದೆ. ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್ ಅನ್ನು ನಮ್ಮ ರಾಜ್ಯದಲ್ಲಿ ಮೊದಲ ಬಾರಿ ಆಯೋಜಿಸುತ್ತಿರುವುದು ಅತ್ಯಂತ ಹೆಮ್ಮೆ ಮತ್ತು ಮಹತ್ವದ ಸಂಗತಿಯಾಗಿದೆ. ನಮ್ಮ ಕುಸ್ತಿಪಟುಗಳು ಏನು ಮಾಡಬಲ್ಲರು ಎಂಬುದನ್ನು ದೇಶಕ್ಕೆ ತೋರಿಸಲು ನಾವು ಉತ್ಸುಕರಾಗಿದ್ದೇವೆ’’ ಎಂದು ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ಹೇಳಿದ್ದಾರೆ.

ಕರ್ನಾಟಕದಲ್ಲಿ ಇದೇ ಮೊದಲ ಬಾರಿ ಹಿರಿಯರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಶಿಪ್‌ ಆಯೋಜಿಸುವ ಮೂಲಕ ರಾಜ್ಯ ಕುಸ್ತಿ ಸಂಸ್ಥೆ ಇತಿಹಾಸ ನಿರ್ಮಿಸಲು ಹೊರಟಿದೆ.

ಈ ಮಹತ್ವದ ಕುಸ್ತಿ ಚಾಂಪಿಯನ್‌ಶಿಪ್‌ಗೆ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದು, ದೇಶಾದ್ಯಂತ 1000ಕ್ಕೂ ಹೆಚ್ಚು ಕುಸ್ತಿಪಟುಗಳು ಮತ್ತು ಅಧಿಕಾರಿಗಳು ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಲಿದ್ದಾರೆ.